ಹೈದರಾಲಿ


Contributors to Wikimedia projects

Article Images

ಹೈದರಾಲಿ

(ಹೈದರ-ಅಲಿ ಇಂದ ಪುನರ್ನಿರ್ದೇಶಿತ)

ಸಯ್ಯದ್ ವಲ್ ಶರೀಫ್ ಹೈದರ್ ಅಲಿ ಖಾನ್ ಅಥವಾ ಹೈದರ್ ಅಲಿ (ಕ್ರಿ. ಶ. 1722 - 7 ಡಿಸೆಂಬರ್ 1782) ದಕ್ಷಿಣ ಭಾರತದ ಮೈಸೂರು ರಾಜ್ಯವನ್ನಾಳುತ್ತಿದ್ದ ಸುಲ್ತಾನರು. ಇವರು ಟಿಪ್ಪು ಸುಲ್ತಾನರ ತಂದೆ. ಶ್ರೀರಂಗಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದರು. ಮೊದಲು ಇವರು ಮೈಸೂರು ರಾಜರ ದಿಂಡಿಗಲ್‌ನ ಫೌಜುದಾರನಾಗಿದ್ದರು. ತನ್ನ ಸೈನಿಕ ಕಾರ್ಯಾಚರಣೆಗಳಿಂದಾಗಿ ಮೈಸೂರು ಒಡೆಯರಾಗಿದ್ದ ಚಿಕ್ಕಕೃಷ್ಣರಾಜ ಒಡೆಯರ್‌ ರವರ ದಳವಾಯಿ ಸ್ಥಾನಕ್ಕೇರಿದರು. ಕ್ರಮೇಣ 1761 ರಲ್ಲಿ ಮೈಸೂರಿನ ಸರ್ವಾಧಿಕಾರಿಯಾಗಿಯೂ, 1766 ರಲ್ಲಿ ಅವರ ಮರಣಾನಂತರ ಮೈಸೂರಿನ ವಾಸ್ತವ ಸುಲ್ತಾನನಾಗಿಯೂ ಅಧಿಕಾರ ವಹಿಸಿಕೊಂಡರು.

ಹೈದರ ಅಲಿ
ನವಾಬ್‌ ಸಯ್ಯಿದ್‌ ವಲ್‌ ಷರೀಫ್‌ ಹೈದರ್‌ ಅಲಿ ಖಾನ್‌ ಬಹದ್ದೂರ್
ಸರ್ವಾಧಿಕಾರಿ
ಆಳ್ವಿಕೆ 1761-1782
ಪಟ್ಟಾಭಿಷೇಕ 1766 ರಲ್ಲಿ ಮೈಸೂರಿನ ಸುಲ್ತಾನ್
ಪೂರ್ವಾಧಿಕಾರಿ ಕೃಷ್ಣರಾಜ ವೊಡೆಯಾರ್ II
ಉತ್ತರಾಧಿಕಾರಿ ಟಿಪ್ಪು ಸುಲ್ತಾನ್
ಸಂತಾನ
ಟಿಪ್ಪು ಸುಲ್ತಾನ್
ಪೂರ್ಣ ಹೆಸರು
ನವಾಬ್‌ ಸಯ್ಯಿದ್‌ ವಲ್‌ ಷರೀಫ್‌ ಹೈದರ್‌ ಅಲಿ ಖಾನ್‌ ಬಹದ್ದೂರ್(ಪತ್ನಿ:ಫಾತಿಮಾ ಫಖರ್-ಅನ್-ನಿಸಾ)
ತಂದೆ ಫತ್‌ ಮಹಮ್ಮದ್
ತಾಯಿ ಲಾಲ್ ಬೀ
ಜನನ ಕ್ರಿ.ಶ 1720
ಬೂದಿಕೋಟೆ, ಕೋಲಾರ, ಕರ್ನಾಟಕ
ಮರಣ ಡಿ. 7, 1782 (60–61 ವರ್ಷ)
ಚಿತ್ತೂರು, ಆಂಧ್ರ ಪ್ರದೇಶ, ಭಾರತ
Burial ಶ್ರೀರಂಗಪಟ್ಟಣ, ಈಗಿನ ಮಂಡ್ಯ,ಕರ್ನಾಟಕ
ಧರ್ಮ ಇಸ್ಲಾಂ

ಹೈದರನ ಜನ್ಮವರ್ಷದ ಬಗೆಗೆ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. 1717-1721 ರ ನಡುವಿನ ಅವಧಿಯಲ್ಲಿ ಅವನು ಜನಿಸಿರಬಹುದೆಂದು ಹೇಳಲಾಗಿದೆ[] ಹೈದರನ ಪೂರ್ವಿಕರು ಅರೇಬಿಯಾದ ಕುರೈಷ್‌ ಬುಡಕಟ್ಟು ಜನಾಂಗಕ್ಕೆ ಸೇರಿದ್ದು ಇರಾನ್‌, ಇರಾಕ್‌ಗಳ ಮೂಲಕ ಭಾರತಕ್ಕೆ ವಲಸೆ ಬಂದು ದೆಹಲಿಯಲ್ಲಿ ನೆಲೆಸಿದ್ದರು. ದೆಹಲಿಯಿಂದ ಗುಲ್ಬರ್ಗಾ ನಂತರ ಬಿಜಾಪುರಗಳಲ್ಲಿ ನೆಲೆನಿಂತರು. ಬಿಜಾಪುರ ಮೊಘಲರ ವಶವಾದಾಗ ಕೋಲಾರಕ್ಕೆ ಬಂದು ನೆಲೆಸಿದರು. ತಂದೆ ಫತೇ ಮಹಮ್ಮದ್‌ ಶಿರಾ ಮತ್ತು ಆರ್ಕಾಟಿನ ನವಾಬನ ಸೇವೆಯಲ್ಲಿದ್ದ.[]

ಹೈದರ್ ಕೋಲಾರ ಸಮೀಪದ ಬೂದಿಕೋಟೆಯಲ್ಲಿ ಫತ್‌ ಮಹಮ್ಮದ್‌ ಮತ್ತು ಲಾಲ್‌ ಬಾಯಿ ದಂಪತಿಯ ಎರಡನೇ ಮಗನಾಗಿ ಜನಿಸಿದ‌. ಇವನ ಆರಂಭಿಕ ಜೀವನದ ಕುರಿತು ಅಷ್ಟು ಹೆಚ್ಚಿನ ಮಾಹಿತಿಗಳು ದೊರೆಯುವುದಿಲ್ಲ; ತಂದೆಯ ಮರಣಾನಂತರ ತನ್ನ ಸಹೋದರ ಷಹಬಾಜ್‌ ಜೊತೆಗೂಡಿ ಆರ್ಕಾಟಿನ ನವಾಬನ ಸೇನೆಯಲ್ಲಿ ಸೇವೆ ಸಲ್ಲಿಸಿದ. ಕಾರಣ ಶಿಕ್ಷಣ ವಂಚಿತನಾಗಿ ಬೆಳೆಯಬೇಕಾಯಿತು. ಮುಂದೆ ಶ್ರೀರಂಗಪಟ್ಟಣಕ್ಕೆ ಬಂದು ಚಿಕ್ಕಪ್ಪ ಇಬ್ರಾಹಿಂ ಸಾಹಿಬ್‌ ಸಹಾಯದಿಂದ ಮೈಸೂರಿನ ಚಿಕ್ಕಕೃಷ್ಣರಾಜ ಒಡೆಯರ ಸೇನೆಯಲ್ಲಿ ಸಹೋದರನೊಂದಿಗೆ 300 ಕಾಲಾಳುಗಳು ಮತ್ತು 70 ಕುದುರೆಗಳಿದ್ದ ತುಕಡಿಯ ಮುಖ್ಯಸ್ಥನಾಗಿ ನೇಮಕಗೊಂಡ.[]

 
ಹೈದರಾಲಿ

ಹೈದರ್‌ ಮೈಸೂರಿನ ಸೇನೆ ಪ್ರವೇಶಿಸಿದ ಸಂದರ್ಭದಲ್ಲಿ ಚಿಕ್ಕದೇವರಾಜ ಒಡೆಯರನ್ನು ನೆಪಮಾತ್ರಕ್ಕೆ ಸಿಂಹಾಸನದಲ್ಲಿ ಕೂರಿಸಿ ದಳವಾಯಿ ದೇವರಾಜನೂ, ಸರ್ವಾಧಿಕಾರಿ ನಂಜರಾಜನೂ ಅಧಿಕಾರ ಚಲಾಯಿಸುತ್ತಿದ್ದರು. 1749 ರಲ್ಲಿ ದೇವನಹಳ್ಳಿ ಕೋಟೆಯ ಮುತ್ತಿಗೆಯಲ್ಲಿ ಇವನು ತೋರಿದ ಸಾಹಸಗಳಿಂದಾಗಿ ಬಹುಬೇಗ ಉನ್ನತ ಹುದ್ದೆಗೇರಿದ.

1749ರಲ್ಲಿ ಆರಂಭವಾದ ಎರಡನೇ ಕರ್ನಾಟಿಕ್‌ ಕದನಕ್ಕೆ ತಿರುಚನಾಪಲ್ಲಿಯನ್ನು ಪಡೆಯುವ ಆಸೆಯಿಂದ ನಂಜರಾಜ ಹೈದರನ ನೇತೃತ್ವದಲ್ಲಿ ಮೈಸೂರು ಸೇನೆಯನ್ನು ಆರ್ಕಾಟಿನ ನವಾಬ ಮಹಮ್ಮದ್‌ ಅಲಿಯ ನೆರವಿಗೆ ಕಳಿಸಿದ್ದ. ಫ್ರೆಂಚರೊಡಗೂಡಿ ಮೈಸೂರಿನ ಸೇನೆ ಇಂಗ್ಲೀಷರ ವಿರುದ್ಧ ಹೋರಾಡಿತು. ಈ ಕಾರ್ಯಾಚರಣೆಯಲ್ಲಿ 4 ವರ್ಷಗಳಿಗೂ ಹೆಚ್ಚಿನ ಅವಧಿ ಪಾಲ್ಗೊಂಡು ಅಪಾರ ಯುದ್ಧಾನುಭವವನ್ನೂ, ಹಿಂದಿರುಗುವಾಗ ಫ್ರೆಂಚರ ಆಧುನಿಕ ತುಪಾಕಿ, ಯುದ್ಧಸಾಮಾಗ್ರಿಗಳನ್ನೂ, ಚಿನ್ನವನ್ನೂ ತನ್ನ ಸಂಗಡ ಹೊತ್ತೊಯ್ದ.[]

ಕರ್ನಾಟಿಕ್‌ ಯುದ್ಧಗಳಿಂದ ಹೈದರ್‌ ತಂದಿದ್ದ ಅಪಾರ ಸಂಪತ್ತು ಅವನಲ್ಲೇ ಉಳಿದಿತ್ತೇ ವಿನಃ ನಂಜರಾಜನಿಗೆ ಸೇರಲಿಲ್ಲ. ಅದನ್ನು ಮೈಸೂರು ಸೈನಿಕರ ವೇತನ ಬಾಕಿ ನಿರ್ವಹಿಸಲು ಬಳಸಿಕೊಂಡು ಸೈನಿಕರ ಸಂಪೂರ್ಣ ವಿಶ್ವಾಸ ಗಳಿಸಿಕೊಂಡನಲ್ಲದೇ, ನಂಜರಾಜನಿಗೆ ಒದಗಿದ್ದ ಆರ್ಥಿಕ ಸಂಕಷ್ಟ ಪರಿಹರಿಸಿ ಅವನಿಂದ ದಿಂಡಿಗಲ್ಲಿನ ಫೌಜುದಾರಿಕೆಯನ್ನು ಪಡೆದುಕೊಂಡ. ಈ ವೇಳೆಗೆ ಹೈದರನ ಕೈಯಡಿ 1500 ಕುದುರೆಗಳೂ, 300 ಪದಾತಿದಳವೂ, 2000 ಜವಾನರೂ ಇದ್ದರು.

1757ರಲ್ಲಿ ಮರಾಠರು ಮತ್ತು ಹೈದರಾಬಾದಿನ ನಿಜಾಮರ ದಾಳಿಗಳ ಭಯದಿಂದಾಗಿ ನಂಜರಾಜನು ಇವನನ್ನು ಶ್ರೀರಂಗಪಟ್ಟಣಕ್ಕೆ ಕರೆಸಿಕೊಂಡ. ಈ ವೇಳೆಗೆ ಮೈಸೂರು ಸೈನಿಕರು ವೇತನ ಬಾಕಿಯಿಂದ ನೊಂದು ನಂಜರಾಜನ ವಿರುದ್ದ ದಂಗೆ ಏಳುವ ಪರಿಸಥಿತಿಯಲ್ಲಿದ್ದುದನ್ನು ಗಮನಿಸಿದ ಹೈದರ್‌ ಅವರ ಬಾಕಿಗಳನ್ನು ತೀರಿಸಿದನಲ್ಲದೇ, ದಂಗೆ ಏಳಲು ಪ್ರೇರೇಪಿಸಿದವರನ್ನು ಬಂಧಿಸಿದ. ಇದರಿಂದ ಮೈಸೂರು ಸೈನಿಕರ ಸಂಪೂರ್ಣ ವಿಶ್ವಾಸವನ್ನು ಗಳಿಸಿಕೊಂಡ.

ಕಲ್ಲಿಕೋಟೆಯ ಮೆಲೆ ದಂಡೆತ್ತಿ ಹೋದದ್ದು

ಬದಲಾಯಿಸಿ

ಮಲಬಾರ್‌ ತೀರ ಪ್ರದೇಶಗಳನ್ನಾಳುತ್ತಿದ್ದ ನಾಯಿರ್‌ ಗಳ ಮೇಲೆ ದಂಡಯಾತ್ರೆಯನ್ನು ಕೈಗೊಂಡು ಯಶಸ್ವಿಯಾಗಿ, ಸಂಪತ್ತಿನೋಂದಿಗೆ ಹಿಂದಿರುಗಿದ. ಈ ಕಾರ್ಯಸಾಧನೆಗಾಗಿ ದೇವರಾಜನಿಂದ ಬೆಂಗಳೂರಿನ ಜಹಗೀರು ಪಡೆದ.

1758 ರಲ್ಲಿ ದಳವಾಯಿ ದೇವರಾಜ ಮೃತಪಟ್ಟ ಹಾಗೂ ಅರಮನೆಯ ಅಂತಃಕಲಹಗಳು ಮಹಾರಾಜರ ವಂಶಸ್ಥರು ನಂಜರಾಜನನ್ನು ಪದಚ್ಯುತಗೊಳಿಸಲು ಎದಿರುನೋಡುತ್ತಿದ್ದರು. ಹೈದರನ್ನು ಇದಕ್ಕೆ ಬಳಸಿಕೊಂಡು ಕೆಲವು ಗ್ರಾಮಗಳನ್ನು ನಂಜರಾಜನಿಗೆ ಉಂಬಳಿಯನ್ನಿತ್ತು ಅವನನ್ನೂ ಅಧಿಕಾರದಿಂದ ದೂರ ಮಾಡಲಾಯಿತು.[] ಅಲ್ಲಿಗೆ ಮೈಸೂರು ಅರಮನೆಯ ಎರಡು ಪಿಡುಗುಗಳು ದೂರವಾದವು. ಹೈದರ್‌ ಮೈಸೂರಿನ ಸರ್ವಾಧಿಕಾರಿಯಾದ. 1758-1761 ರ ವರೆಗಿನ ಮೂರು ವರ್ಷಗಳ ಅವಧಿಯನ್ನು ಸ್ವಲ್ಪ ಮಟ್ಟಿಗೆ ರಾಜ್ಯ ವಿಸ್ತಾರಕ್ಕೂ, ಮೈಸೂರು ರಾಜ್ಯದ ಮೇಲೆ ಹಿಡಿತ ಸಾಧಿಸುವುದಕ್ಕೂ ಬಳಸಿಕೊಂಡ.

ಮರಾಠರು ಬೆಂಗಳೂರು, ಚನ್ನಪಟ್ಟಣ ಮೊದಲಾದ ಪ್ರದೇಶಗಳನ್ನು ವಶಪಡಿಸಿಕೊಂಡು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲಾರಂಭಿಸಿದರು. 1758 ರಲ್ಲಿ ಹೈದರ್‌ ಮರಾಠರನ್ನು ಬೆಂಗಳೂರು ಮತ್ತು ಚೆನ್ನಪಟ್ಟಣಗಳಿಂದ ಹೊರದೂಡುವಲ್ಲಿ ಯಶಸ್ವಿಯಾದ. 1759ರ ಹೊತ್ತಿಗೆ ಹೈದರ್‌ ಸಂಪೂರ್ಣ ಮೈಸೂರು ಸೇನೆಯ ಅಧಿಪತಿಯಾಗಿದ್ದ.[]

ಚಿಕ್ಕಕೃಷ್ಣರಾಜರು ಹೈದರನ ಶೌರ್ಯ-ಸಾಹಸಗಳಿಗೆ ಅವನಿಗೆ ಫತೇ ಹೈದರ್‌ ಬಹದ್ದೂರ್‌ ಎಂಬ ಬಿರುದನ್ನಿತ್ತು ಗೌರವಿಸಿದರು.[] ಅದೇ ವೇಳೆಗೆ ನಂಜರಾಜನನ್ನೂ ಅಧಿಕಾರದಿಂದ ಪದಚ್ಯುತಗೊಳಿಸಲಾಗಿತ್ತು. ಹೈದರ್‌ 1759ರ ವೇಳೆಗೆ ನವಾಬ್‌ ಹುದ್ದೆಗೇರಿದ ಮೈಸೂರಿನ ಮೊದಲಿಗನಾದ.

ಮೈಸೂರು ರಾಜಮಾತೆಯೂ, ಸೈನಿಕ ಕಾರ್ಯದರ್ಶಿ ಖಂಡೇರಾಯನೂ ಕ್ರಮೇಣ ಹೈದರ್‌ ಮುಸಲ್ಮಾನನೆಂದೂ, ಅವನ ಏಳಿಗೆಯನ್ನು ಸಹಿಸಲಾರದೆಯೂ ಒಳಸಂಚು ರೂಪಿಸಿ, 1760 ಆಗಸ್ಟ್‌ ನಲ್ಲಿ ಮರಾಠರು ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡುತ್ತಾರೆಂದು ತಿಳಿದಿದ್ದ ಖಂಡೇರಾಯ 12ನೇ ಆಗಸ್ಟ್‌ 1760 ಹೈದರನ ಶಿಭಿರದ ಮೇಲೆಯೇ ಶ್ರೀರಂಗಪಟ್ಟಣ ಕೋಟೆಯಿಂದ ಗುಂಡು ಹಾರಿಸಲು ಶುರು ಮಾಡಿದ್ದ. ಆದರೆ ಹೈದರ್‌ ಇದರಿಂದ ತಪ್ಪಿಸಿಕೊಂಡು ಸೇನೆಯನ್ನೂ ರಕ್ಷಿಸಿದ. ಇನ್ನೊಂದೆಡೆ ಖಂಡೇರಾಯನ ನಿರೀಕ್ಷೆಯಂತೆ ಮರಾಠರೂ ದಾಳಿ ಮಾಡಲಿಲ್ಲ. ಆ ಸಂದರ್ಭ ಹೈದರ್‌ ಅಪಾಯದಿಂದ ಪಾರಾಗಲು ತಾತ್ಕಾಲಿಕ ಒಪ್ಪಂದವೊಂದನ್ನು ಖಂಡೇರಾಯನೊಂದಿಗೆ ಮಾಡಿಕೊಂಡ. ಮುಂದುವರಿದು, ಚದುರಿದ್ದ ಸೇನೆಯನ್ನು ಸಂಘಟಿಸಿ, ಫ್ರೆಂಚ್‌ ಸೇನಾ ನೆರವನ್ನೂ ಪಡೆದು ಗಡಿಯಂಚಿನ ಪ್ರದೇಶಗಳನ್ನು ವಶಪಡಿಸಿಕೊಳ್ಲುವಲ್ಲಿ ನಿರತನಾದ. ಕೊಯಮತ್ತೂರು ಮತ್ತು ಸೇಲಂ ಪ್ರದೇಶಗಳನ್ನು ಗೆದ್ದುಕೊಂಡ. ಆದರೂ ಖಂಡೇರಾಯನನ್ನು ಎದುರಿಸಲು ಹೈದರ್‌ ಶಕ್ತನಾಗಿರಲಿಲ್ಲ. ಕೊನೆಗೆ ನಿವೃತ್ತ ಸರ್ವಾಧಿಕಾರಿ ನಂಜರಾಜನ ನೆರವನ್ನು ಪಡೆದು ದಾಳಿಯೆಸಗಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಹಾಗೂ ಮೈಸೂರಿನ ಸುಲ್ತಾನನಾದ.[]

ಖಂಡೇರಾಯನ ಬಂಡಾಯವನ್ನು ಸಮರ್ಥವಾಗಿ ಅಡಗಿಸಿದ ಹೈದರ್‌ ಮೈಸೂರು ರಾಜ್ಯದ ಸಂಪೂರ್ಣ ಹಿಡಿತ ಕೈಗೆತ್ತಿಕೊಂಡ. ಈ ಮಧ್ಯೆ 1761 ರ ಮೂರನೇ ಪಾಣಿಪತ್‌ ಕದನದಲ್ಲಿ ಮರಾಠಾ ಒಕ್ಕೂಟ ಅಹ್ಮದ್‌ ಷಾ ಅಬ್ದಾಲಿಯ ಸೇನೆಯೆದುರು ಸಂಪೂರ್ಣವಾಗಿ ಸೋತುಹೊಗಿತ್ತು. ಇನ್ನೊಂದೆಡೆ 1764ರ ಬಕ್ಸಾರ್‌ ಕದನದಲ್ಲಿ ಮೀರ್‌ ಖಾಸಿಂ ನೆರವಿಗೆ ನಿಂತು ಸೋತಿದ್ದ ಮೊಘಲ್‌ ದೊರೆ ಎರಡನೇ ಷಾ ಆಲಂ 1765ರ ಒಪ್ಪಂದದಂತೆ ಇಂಗ್ಲೀಷ್‌ ಈಸ್ಟ್‌ ಇಂಡಿಯಾ ಕಂಪನಿಯ ಕೈಗೊಂಬೆಯಾಗಿದ್ದ. ಕುಸಿದ ಪ್ರಭಲ ಸಾಮ್ರಾಜ್ಯಗಳ ಲಾಭ ಪಡದ ಹೈದರ್‌ 1761 ರಲ್ಲಿ ದಖ್ಖನ್ನಿನ ಮೊಘಲ್‌ ರಾಜಧಾನಿ ಶಿರಾವನ್ನೂ, ಮುಂದುವರಿದು ಶಿರಾದ ಸುತ್ತಮುತ್ತಲ ಪ್ರಾಂತ್ಯಗಳನ್ನೂ (ಹೊಸಕೋಟೆ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಪೆನುಕೊಂಡ ಮಡಕಶಿರಾ, ನಂದಿದುರ್ಗ, ಹರಪನಹಳ್ಳಿ ಮತ್ತು ಚಿತ್ರದುರ್ಗ) ಜಯಿಸಿದ. ಅಪಾರ ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿದ್ದ ಬಿದನೂರು ವಿಜಯ ಇವನ ವಿಜಯಗಳಲ್ಲೇ ಅತೀ ಪ್ರಮುಖವಾದದ್ದು. ಹೊನ್ನಾವರದಿಂದ ಪಶ್ಚಿಮ ತೀರಕ್ಕೂ, ಗೋವೆಯ ವರೆಗೂ ಸಾಮ್ರಾಜ್ಯ ವಿಸ್ತರಿಸಿಕೊಂಡ. ಡಚ್ಚರ ನೆರವನ್ನು ಪಡೆದು ನೌಕಾಪಡೆಯನ್ನು ಬಲಗೊಳಿಸಿ ನಾಯರ್ ಗಳಿಂದ ಮಲಬಾರ್‌ ವಶಪಡಿಸಿಕೊಂಡ.[]

ಬಕ್ಸಾರ್‌ ಕದನದ ವಿಜಯದ ನಂತರ ಹೆಕ್ಟೇರ್‌ ಮನ್ರೋ ನೇತೃತ್ವದ ಈಸ್ಟ್‌ ಇಂಡಿಯಾ ಕಂಪನಿ ಎರಡನೇ ಷಾ ಆಲಂ ಮತ್ತು ಮೈಸೂರಿನ ನವಾಬನನ್ನು ಮಣಿಸಲು ಮರಾಠ ಒಕ್ಕೂಟಕ್ಕೆ ನೆರವನ್ನು ನೀಡಲು ಮುಂದಾಯಿತು. ಅಲ್ಲದೇ ಮೈಸೂರು-ಮರಾಠರ ಸೆಣೆಸಾಟಗಳು, ತನ್ನ ವೈರಿ ಫ್ರೆಂಚ್‌ ಸೇನಾ ನೆರವಿನೊಂದಿಗೆ ದಖ್ಖನ್ನಿನಲ್ಲಿ ಪ್ರಬಲನಾಗಿ ಬೆಳೆಯುತ್ತಿದ್ದ ಹೈದರ್ ಏಳಿಗೆಯು ಬ್ರಿಟೀಷ್ ವ್ಯಾಪಾರಿ ಕಂಪನಿಯ‌ ಯುದ್ಧಪ್ರವೇಶಕ್ಕೆ ನಾಂದಿ ಹಾಡಿದವು. ಮೈಸೂರಿನ ಸಾಂಪ್ರದಾಯಿಕ ವೈರಿ ಮರಾಠರು ಮತ್ತು ಹೈದರಾಬಾದಿನ ನಿಜಾಮನೊಂದಿಗೆ ಒಕ್ಕೂಟ ರಚಿಸಿಕೊಂಡ ಬ್ರಿಟೀಷರು 1766 ರಲ್ಲಿ ಹೈದರನ ವಿರುದ್ಧ ದಾಳಿಯೆಸಗಿದರು. ಆದರೆ ಚಾಣಾಕ್ಷತೆಯಿಂದ ಒಕ್ಕೂಟವನ್ನು ಒಡೆದು ಬ್ರಿಟೀಷರನ್ನು ಮಣಿಸಿದ ಹೈದರ್‌ 1770 ರಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವಂತೆ ಆದೇಶಿಸಿದನು. ವಿಧಿಯಿಲ್ಲದೇ ಬ್ರಿಟೀಷರು ಮದ್ರಾಸ್‌ ಒಪ್ಪಂದಕ್ಕೆ 1770 ರಲ್ಲಿ ಸಹಿ ಹಾಕಬೇಕಾಯಿತು. ಇದು ಬ್ರಿಟೀಷರಿಗೆ ಅವಮಾನಕರವೂ, ಹೈದರನಿಗೆ ಪ್ರಖ್ಯಾತಿಯನ್ನೂ ತಂದುಕೊಟ್ಟ ಒಪ್ಪಂದವಾಗಿತ್ತು.

ಮೊದಲನೇ ಆಂಗ್ಲೋ ಮೈಸೂರು ಯುದ್ಧದಿಂದ ಮರಾಠರಿಗೇನೂ ಲಾಭವಾಗಲಿಲ್ಲ. ಬದಲಾಗಿ ಮೈಸೂರಿನ ಮೇಲಿನ ಹಗೆತನ ಇನ್ನಷ್ಟು ಹೆಚ್ಚಾಯಿತು. 1770 ರ ಜನವರಿಯಲ್ಲಿ ಮರಾಠರು ಹೈದರನ ವಿರುದ್ಧ ದಂಡೆತ್ತಿ ಬಂದಾಗ ಮದ್ರಾಸು ಒಪ್ಪಂದದ ಕರಾರಿನಂತೆ ಇವನಿಗೆ ಬ್ರಿಟೀಷರು ಸೇನಾ ನೆರವನ್ನು ನೀಡಲಿಲ್ಲ. ಆದರೂ ಮರಾಠರನ್ನು ಯಶಸ್ವಿಯಾಗಿ ಸೋಲಿಸಿ, ಕೃಷ್ಣಾನದಿಯ ತನಕ ತನ್ನ ಎಲ್ಲೆಯನ್ನು ವಿಸ್ತರಿಸುವಲ್ಲಿ ಯಶಸ್ವಿಯಾದ ಹಾಗೂ ಕೊಡಗನ್ನು ವಶಕ್ಕೆ ಪಡೆದುಕೊಂಡ.

ಮರಾಠರ ದಾಳಿಗಳ ಸಂದರ್ಭ ಮದ್ರಾಸು ಒಪ್ಪಂದದಂತೆ, ದಾಳಿಗಳ ಸಂದರ್ಭ ನೀಡಬೇಕಿದ್ದ ಯಾವುದೇ ಸೇನಾ ನೆರವನ್ನು ಬ್ರಿಟೀಷರು ಹೈದರಾಲಿಗೆ ನೀಡಲಿಲ್ಲ. ಅಲ್ಲದೇ ಗುಂಟೂರು ಆಕ್ರಮಣದಿಂದಾಗಿ ಹೈದರಾಬಾದಿನ ನಿಜಾಮನ ಮೇಲೂ, ಒಪ್ಪಂದಗಳ ಉಲ್ಲಂಘನೆಗಾಗಿ ಮರಾಠಾ ಒಕ್ಕೂಟ ಮೇಲೂ ಬ್ರಿಟೀಷರು ಕೊಪಗೊಂಡಿದ್ದರು.[೧೦] ಈ ವೇಳೆಗೆ ಮೊದಲ ಆಂಗ್ಲೋ ಮರಾಠ ಯುದ್ಧ ಆಂರಂಭವಾಗಿತ್ತು(1775). ಬ್ರಿಟೀಷರನ್ನು ಮಣಿಸಲು ಮರಾಠರು ಹೈದರನಿಗೆ ಬೆಂಬಲವಿತ್ತರು. ನಿಜಾಮನ ಬೆಂಬಲವನ್ನೂ ಪಡೆದುಕೊಂಡ ಹೈದರ್‌ ಒಕ್ಕೂಟ ರಚಿಸಿಕೊಂಡು ತಮಿಳುನಾಡಿಗೆ ಕ್ಷಿಪ್ರದಾಳಿಯಿತ್ತು ಬ್ರಿಟೀಷರ ವಿರುದ್ಧ ಘಟಿಸಿದ ಯುದ್ಧದಲ್ಲಿ ಜಯಗಳಿಸಿದ ಮತ್ತು ಆರ್ಕಾಟ್ ಅನ್ನು ಆಕ್ರಮಿಸಿದ.[೧೧] ಮುಂದುವರಿದು ಹೈದರ್‌ ಮತ್ತು ಟಿಪ್ಪು ನೇತೃತ್ವದ ಸೇನೆಗಳು ಪೊಲ್ಲಿಲೂರು ಕದನದಲ್ಲಿ ಬೇಲಿ ನೇತೃತ್ವದ ಕಂಪನಿ ಸೇನೆಯನ್ನು ಸೋಲಿಸಿ ಸೆರೆಹಿಡಿದವು. ನಂತರ ಐರ್ ಕೂಟನ ವಿರುದ್ಧ ನಡೆದ ಯುದ್ಧಗಳಲ್ಲಿ (ಪೋರ್ಟೊ ನೋವೋ ಕದನ) ಹೈದರ್‌ ಸೋಲನುಭವಿಸಬೇಕಾಯಿತು ಆದರೂ ತಂಜಾವೂರಿನ ಮುತ್ತಿಗೆಯಲ್ಲಿ ಯಶಸ್ವಿಯಾದ.

ಬ್ರಿಟೀಷರೊಂದಿಗಿನ ಸೆಣೆಸಾಟಗಳು ಮುಗಿಯುವ ಮೊದಲೇ ಹೈದರ್‌ ವಿಪರೀತ ಬೆನ್ನುಹುರಿ ಹುಣ್ಣಿನಿಂದ(ಬೆನ್ನುಫಣಿ ರೋಗ)) ಬಳಲಬೇಕಾಯಿತು. ಅದು ಡಿ.7 1782 ರಲ್ಲಿ ಅವನನ್ನು ಚಿತ್ತೂರು ಬಳಿಯ ಸೇನಶಿಬಿರದಲ್ಲಿ ಬಲಿಪಡೆದುಕೊಂಡಿತು. ಹೈದರನನ್ನು ಶ್ರೀರಂಗಪಟ್ಟಣದಲ್ಲಿ ಸಮಾಧಿಮಾಡಲಾಯಿತು ಮತ್ತು 1782-84 ರ ಅವಧಿಯಲ್ಲಿ ಅವನ ಮಗ ಟಿಪ್ಪು ಸುಲ್ತಾನ್ ಗುಂಬಜ್ ನಿರ್ಮಿಸಿದ.

  1. Bowring, Lewis Bentham (1893). Haider Ali and Tipu Sultan and the struggle with the Mussulman powers of the south. India. p. 13. ISBN 812061299X.{{cite book}}: CS1 maint: location missing publisher (link)
  2. ಅಲಿ, ಷೇಕ್. ಕರ್ನಾಟಕ ಚರಿತ್ರೆ ಸಂಪುಟ ೫. ಹಂಪಿ: ಪ್ರಸಾರಾಂಗ. p. 33.
  3. ಅಲಿ, ಷೇಕ್. ಕರ್ನಾಟಕ ಚರಿತ್ರೆ ಸಂಪುಟ ೫. ಹಂಪಿ: ಪ್ರಸಾರಾಂಗ. p. 36.
  4. ಕನ್ನಡ ವಿಷಯ ವಿಶ್ವಕೋಶ - ಇತಿಹಾಸ ಮತ್ತು ಪುರಾತತ್ವ. ಮೈಸೂರು: ಪ್ರಸಾರಾಂಗ. p. 1141.
  5. ಸುಂದರರಾವ್, ಬ.ನ. ಬೆಂಗಳೂರಿನ ಇತಿಹಾಸ. ಅಂಕಿತ ಪ್ರಕಾಶನ. p. 167.
  6. Bowring, Lewis Bentham. Haidar Ali and Tipu Sultan. p. 29.
  7. Bowring, Lewis Bentham. Haidar Ali and Tipu Sultan. p. 30.
  8. ಅಲಿ, ಷೇಕ್. ಕರ್ನಾಟಕ ಚರಿತ್ರೆ ಸಂಪುಟ ೫. ಹಂಪಿ: ಪ್ರಸಾರಾಂಗ. p. 60.
  9. ಕನ್ನಡ ವಿಷಯ ವಿಶ್ವಕೋಶ - ಇತಿಹಾಸ ಮತ್ತು ಪುರಾತತ್ವ. p. 1141.
  10. Bowring, Lewis Bentham. Haidar Ali and Tipu Sultan. p. 81.
  11. ಕಾಮತ್, ಸೂರ್ಯನಾಥ. ಕರ್ನಾಟಕದ ಸಂಕ್ಷಿಪ್ತ ಇತಿಹಾಸ. p. 220.